ಕೂಕೂ ಹಕ್ಕಿ

ಕಾರಸೈಯಿಫರ್ಮಿಸ್ó ಗಣದ ಊಪೂಪಿಡೀ ಕುಟುಂಬಕ್ಕೆ ಸೇರಿದ ಕೀಟಭಕ್ಷಕ ಹಕ್ಕಿ (ಹೂಪೂ). ವೈಜ್ಞಾನಿಕ ನಾಮ ಊಪೂಪ ಎಪೋಪ್ಸ್. ಕೊಕ್ಕಿನ ತುದಿಯಿಂದ ಹಿಡಿದು ಬಾಲದ ಗರಿಯ ತುದಿಯವರೆಗೂ ಇದರ ಉದ್ದ ಸುಮಾರು 31 ಸೆಂ. ಮೀ. ತಲೆ ಮತ್ತು ಕುತ್ತಿಗೆಯ ಬಣ್ಣ ಹಳದೀ ಮಿಶ್ರಿತ ಮಾಸಲು ಕೆಂಪು. ತಲೆಯ ಮೇಲಿರುವ ಸುಂದರವಾದ ಅರ್ಧ ಚಂದ್ರಾಕಾರದ, ನಿಮಿರಿ ನಿಲ್ಲುವ ಕಪ್ಪು ತುದಿಯ ಗರಿಶಿಖೆ, ತೆಳುವಾದ ಬಾಗಿದ ಕೊಕ್ಕು, ಬಹು ಚಿಕ್ಕ ನಾಲಗೆ, ಬಾಲದಲ್ಲಿನ ಉದ್ದನೆಯ ಹತ್ತು ಗರಿಗಳು, ಮೂರು ಮತ್ತು ನಾಲ್ಕನೆಯ ಬೆರಳುಗಳು ಬುಡಭಾಗದಲ್ಲಿ ಅಂಟಿಕೊಂಡಿರುವುದು-ಇವು ಈ ಹಕ್ಕಿಯ ವಿಶಿಷ್ಟ ಗುಣಗಳು. ತನ್ನ ಶಿಖೆಯ ಗರಿಗಳನ್ನು ಮಡಿಸಿಕೊಂಡಾಗ ಇದರ ತಲೆ ಪಿಕಾಸಿಯಂತೆ ಕಾಣುತ್ತದೆ. ಬಾಲದ ಗರಿಗಳ ಮಧ್ಯಭಾಗದಲ್ಲಿ ಒಂದು ಬಿಳಿಯ ಅಡ್ಡ ಪಟ್ಟೆಯಿದೆ. ದೇಹದ ಬಣ್ಣ ನಸುಗೆಂಪು. ಬೆನ್ನಿನ ಹಾಗೂ ರೆಕ್ಕೆಗಳ ಮೇಲೆ ಬಿಳಿಯ ಮತ್ತು ಕರಿಯ ಪಟ್ಟೆಗಳಿವೆ. ಕೆಲವು ಉಪಪ್ರಭೇದಗಳಲ್ಲಿ ಈ ವರ್ಣವಿನ್ಯಾಸ ಜೀóಬ್ರಾದ ಮೈಮೇಲಿರುವಂತೆ ಕಾಣುತ್ತದೆ. ಹೆಣ್ಣು ಹಕ್ಕಿಯ ದೇಹದಿಂದ ಅಸಹ್ಯಕರವಾದ ಹಳಸಲು ವಾಸನೆ ಸೂಸುತ್ತದೆ. ಶತೃಗಳನ್ನು ದೂರವಿಡಲು ಈ ವಾಸನೆ ಸಹಕಾರಿ ಎಂದು ಹೇಳಲಾಗಿದೆ. ಮಧ್ಯ ಮತ್ತು ದಕ್ಷಿಣ ಯೂರೋಪು, ಆಫ್ರಿಕ, ಏಷ್ಯಾ(ಸೈಬೀರಿಯಾ ಹೊರತಾಗಿ) ಖಂಡಗಳಲ್ಲೆಲ್ಲಾ ಈ ಹಕ್ಕಿ ವ್ಯಾಪಿಸಿದೆ. ಮರಗಿಡಗಳಿಂದ ಕೂಡಿದ ಬಯಲು ಮತ್ತು ಸಾಗುವಳಿ ಪ್ರದೇಶಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು. ಸ್ವಲ್ಪ ದೂರ ವಲಸೆ ಹೋಗುವ ಪರಿಪಾಠವಿದೆ. ಇದು ಸಾಮಾನ್ಯವಾಗಿ ಒಂಟೊಂಟಿಯಾಗಿ ವಾಸಿದರೂ ಕೆಲವು ವೇಳೆ ಸಣ್ಣ ಸಣ್ಣ ಗುಂಪು ಕೂಡಿಕೊಂಡು ಹಾರಾಡುವುದು ಉಂಟು. ಇದರ ಹಾರಾಟ ಮಂದಗತಿಯದು: ತರಂಗರೂಪದ್ದು. ಆದರೆ ಗಾಬರಿಗೊಂಡಾಗ ವೇಗವಾಗಿ ಹಾರಬಲ್ಲದು. ಕೀಟ, ಜೇಡ ಮತ್ತು ಕ್ರಿಮಿಗಳೇ ಇದರ ಮುಖ್ಯ ಆಹಾರ. ಸಗಣಿ, ಗೊಬ್ಬರಗುಂಡಿ, ನೆಲ ಮುಂತಾದೆಡೆ ತನ್ನ ಕೊಕ್ಕಿನಿಂದ ಕುಕ್ಕಿ ಕೀಟಗಳನ್ನು ಆರಿಸುತ್ತ ಸಾಗುತ್ತದೆ. ಕೂ-ಕೂ- ಕೂ-ಕೂ ಎಂದು ವಿಚಿತ್ರವಾಗಿ ಕೂಗುತ್ತದೆ. ಇದರಿಂದಲೇ ಇದಕ್ಕೆ ಕೂಕೂ ಹಕ್ಕಿ ಎಂದೂ ಕರೆಯುತ್ತಾರೆ. ಹೆಣ್ಣು ಗಂಡುಗಳ ಬಾಹ್ಯರೂಪದಲ್ಲಿ ವ್ಯತ್ಯಾಸ ಬಹಳ ಕಡಿಮೆ. ಇದು ಸಂತಾನೋತ್ಪತ್ತಿಕಾಲದಲ್ಲಿ ಮರಗಳ ಪೊಟರೆ, ಗೋಡೆಯ ಅಗಲವಾದ ಬಿರುಕು, ಗೆದ್ದಲುಗಳ ಗೋಡು, ಏರಿ, ಡೊಗರುಗಳಲ್ಲಿ ಗೂಡುಕಟ್ಟುತ್ತದೆ. ಗೂಡನ್ನು ಸ್ವಲ್ಪ ಮೆತ್ತಗೆ ಮಾಡಲು ಅಲ್ಪ ಸ್ವಲ್ಪ ಹುಲ್ಲು, ಗರಿ, ಎಲೆ, ಉಣ್ಣೆಗಳನ್ನು ಸೇರಿಸಿರುವುದುಂಟು. ಆದರೆ ತನ್ನ ಉಚ್ಚಿಷ್ಠವನ್ನಾಗಲಿ ಹಿಕ್ಕೆಯನ್ನಾಗಲಿ ಗೂಡಿನಿಂದ ತೆಗೆದು ಹಾಕುವುದಿಲ್ಲವಾಗಿ ಇದರ ಗೂಡು ಅತ್ಯಂತ ಕೊಳಕಾಗಿಯೂ ದುರ್ವಾಸನೆಯುಳ್ಳದ್ದೂ ಆಗಿರುತ್ತದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ `ಹೂಡೆಯಷ್ಟು ಕೊಳಕು ಎಂಬರ್ಥದ ಗಾದೆಯಿದೆ. ಗೂಡಿನಲ್ಲಿ 4-6 ಮೊಟ್ಟೆಗಳಿರುತ್ತವೆ. ಹೆಣ್ಣು ಹಕ್ಕಿ ಮಾತ್ರ 16-18 ದಿವಸಗಳವರೆಗೆ ಹಗಲಿರುಳು ಮೊಟ್ಟೆಗಳ ಮೇಲೆ ಕೂತು ಕಾವುಕೊಡುತ್ತದೆ. ಈ ಕಾಲದಲ್ಲಿ ಹಾಗೂ ಮೊಟ್ಟೆಗಳಿಡುವ ಮುನ್ನ ಪ್ರೇಮಾಚರಣೆಯ ಕಾಲದಲ್ಲಿ ಗಂಡು ತನ್ನ ಹೆಂಡತಿಗೆ ಆಹಾರವನ್ನು ಉಣಿಸುತ್ತದೆ. ಮರಿಗಳು ಕೊಂಚ ದೊಡ್ಡವಾದ ಅನಂತರ ಗಂಡು ಹೆಣ್ಣುಗಳೆರಡೂ ಆಹಾರವನ್ನು ಹುಡುಕಿ ತಂದು ಮರಿಗಳಿಗೆ ತಿನ್ನಿಸಿ ಪೋಷಣೆ ಮಾಡುತ್ತವೆ.
(ಬಿ.ಎನ್.ಬಿ.)
(ಪರಿಷ್ಕರಣೆ: ಕೆ ಎಸ್ ನವೀನ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ